An unconventional News Portal.

ಒಬ್ಬರಿಗೆ ಇನಾಮು; ಇನ್ನೊಬ್ಬರಿಗೆ ವರ್ಗಾವಣೆ: ಇದು ವಿಜಯವಾಣಿಯ ‘ಸಾಮಾಜಿಕ ನ್ಯಾಯ’!

ಒಬ್ಬರಿಗೆ ಇನಾಮು; ಇನ್ನೊಬ್ಬರಿಗೆ ವರ್ಗಾವಣೆ: ಇದು ವಿಜಯವಾಣಿಯ ‘ಸಾಮಾಜಿಕ ನ್ಯಾಯ’!

ಇದು ಒಂದೇ ಸಂಸ್ಥೆಗೆ ಸೇರಿದ ಇಬ್ಬರು ಪತ್ರಕರ್ತರ ವಿಭಿನ್ನ ಕತೆ. ಒಬ್ಬರು ಅಜ್ಜಮಾಡು ಕುಟ್ಟಪ್ಪ; ವಿಜಯವಾಣಿ ಪತ್ರಿಕೆಯ ಮಡಿಕೇರಿ ವರದಿಗಾರ. ಮತ್ತೊಬ್ಬರು ವಿಜಯ ಕುಮಾರ್ ಸಿಗರನಹಳ್ಳಿ; ಅದೇ ಪತ್ರಿಕೆಯ ಹಾಸನ ವರದಿಗಾರರಾಗಿದ್ದವರು. ಪ್ರಲೋಭನೆಗೆ ಒಳಗಾಗದೆ ಪ್ರಾಮಾಣಿಕವಾಗಿ ಉಳಿದು ವಸ್ತುನಿಷ್ಟ ವರದಿ ಮಾಡಿದ್ದಕ್ಕೆ ಕುಟ್ಟಪ್ಪರಿಗೆ ಪತ್ರಿಕೆ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುತ್ತದೆ. ತನ್ನೂರಿನಲ್ಲಿ ದಲಿತರು ಅನುಭವಿಸುತ್ತಿದ್ದ ಅಸ್ಪೃಶ್ಯತೆ ಬಗ್ಗೆ ಬರೆದು ಪ್ರಬಲ ಶಕ್ತಿಗಳ ವಿರೋಧ ಕಟ್ಟಿಕೊಂಡ ವಿಜಯಕುಮಾರನನ್ನು ಅದೇ ಪತ್ರಿಕೆ ದೂರದ ಗಂಗಾವತಿಗೆ ವರ್ಗಾವಣೆ ಮಾಡುತ್ತದೆ. ಒಂದೇ ಪತ್ರಿಕೆ; ಒಂದೇ ಆಶಯ ಇಟ್ಟುಕೊಂಡ ಪತ್ರಕರ್ತರು; ಆದರೆ ನಡೆಸಿಕೊಂಡ ರೀತಿಯಲ್ಲಿ ಮಾತ್ರ ಇಬ್ಬಗೆ. ಇದು, ಕನ್ನಡದ ನಂಬರ್-1 ಪತ್ರಿಕೆ ‘ವಿಜಯ ವಾಣಿ’ಯಲ್ಲಿ ಇತ್ತೀಚೆಗೆ ನಡೆದ ಗಮನಾರ್ಹ ಬೆಳವಣಿಗೆಯ ವರದಿ.

ಶ್ಲಾಘನೀಯ ನಡೆ: 

ಪತ್ರಿಕೋದ್ಯಮದ ಮಟ್ಟಿಗೆ ಅಜ್ಜಮಾಡು ಕುಟ್ಟಪ್ಪನ ಪ್ರಕರಣ ಐತಿಹಾಸಿಕ. ಬಹುಶಃ ಕನ್ನಡದ ಯಾವುದೇ ಬರಹಗಾರ, ಪತ್ರಕರ್ತ ಇದುವರೆಗೆ ಪಡೆಯಲಾಗದ ಬೃಹತ್ ಮೊತ್ತದ ಬಹುಮಾನವನ್ನು ‘ವಿಜಯವಾಣಿ’ ಪತ್ರಿಕೆ ತನ್ನ ವರದಿಗಾರನಿಗೆ ನೀಡುವ ಮೂಲಕ ಶ್ಲಾಘನೀಯ ನಡೆ ಇಟ್ಟಿತ್ತು.

ಕುಟ್ಟಪ್ಪ ಅವರಿಗೆ ‘ಪತ್ರಿಕೆ’ ಅಭಿನಂದಿಸಿದ್ದು ಯಾಕೆ ಎಂದರೆ, ಅಕ್ರಮ ಭೂಮಿ ಮಂಜೂರಾತಿ ಪ್ರಕರಣದ ಬಗ್ಗೆ ವರದಿಗಾರ ಕುಟ್ಟಪ್ಪ ಅವರಿಗೆ ಸುದ್ದಿಯೊಂದು ಸಿಕ್ಕಿತ್ತು. ಬೆನ್ನಿಗೆ, ಸುದ್ದಿ ಮಾಡದಂತೆ ಬೆದರಿಕೆ ಬಂದಿತ್ತು. ಆ ಬಗ್ಗೆ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ದೂರಿನಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ. ಹೀಗಾಗಿ, ದೂರನ್ನು ಹಿಂಪಡೆಯುವಂತೆ ಮತ್ತೆ ಒತ್ತಡ ಹೇರಲು ಶುರುಮಾಡಿದ. ಅದು ಕೆಲಸ ಮಾಡದ ಹಿನ್ನೆಲೆಯಲ್ಲಿ, ಕೊನೆಗೆ ಹಣದ ಆಮಿಷ ಬಂತು. ಆದರೆ, ಇದ್ಯಾವುದಕ್ಕೂ ಕುಟ್ಟಪ್ಪ ತಲೆಬಾಗಲಿಲ್ಲ. ಇದನ್ನು ಗುರುತಿಸಿದ ‘ಪತ್ರಿಕೆ’ ಮಾಲೀಕರಾದ ವಿಜಯ ಸಂಕೇಶ್ವರ ಕುಟ್ಟಪ್ಪ ಅವರಿಗೆ ಹತ್ತು ಲಕ್ಷ ರೂಪಾಯಿ, ಮೇಲೊಂದಿಷ್ಟು ಬಂಗಾರ ಕೊಟ್ಟು ಸನ್ಮಾನ ಮಾಡಿದರು. ಏಪ್ರಿಲ್ 2ರಂದು ಐದು ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆ ಸಮಯದಲ್ಲಿ ಇಂತಹದೊಂದು ಶ್ಲಾಘನೀಯ ನಡೆಯನ್ನು ಸಂಕೇಶ್ವರ್ ಇಟ್ಟಿದ್ದರು.

ಈ ಕಣ್ಣಿಗ್ಯಾಕೆ ಸುಣ್ಣ?:

ಆದರೆ, ಇದಕ್ಕೆ ವ್ಯತಿರಿಕ್ತವಾದ ನಡೆಯನ್ನು ‘ವಿಜಯವಾಣಿ’ ಆಡಳಿತ ಮಂಡಳಿ ಹಾಸನ ಜಿಲ್ಲಾ ವರದಿಗಾರ ವಿಜಯ ಕುಮಾರ್ ಪ್ರಕರಣದಲ್ಲಿ ಇಡುವ ಮೂಲಕ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ, ಅಲ್ಲಿ ನಡೆದಿದ್ದು ಏನು ಎಂದರೆ, ಮಾಜಿ ಪ್ರಧಾನಿ ದೇವೇಗೌಡದ ಹುಟ್ಟೂರಿನಿಂದ 2 ಕಿ.ಮೀ ಅಂತದಲ್ಲಿ ಸಿಗರನಹಳ್ಳಿ ಎಂಬ ಗ್ರಾಮ ಒಂದಿದೆ. ಅಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಐದು ದಲಿತ ಮಹಿಳೆಯರು ಊರಿನ ಬಸವೇಶ್ವರ ದೇವಸ್ಥಾನ ಪ್ರವೇಶ ಮಾಡಿದರು. ಇದನ್ನು ದೇವರಿಗೆ ಮಾಡಿದ ಅವಮಾನ ಎಂದು ತೀರ್ಮಾನಿಸಿದ ಊರಿನ ಮೇಲ್ವರ್ಗದ ಜನ ದಲಿತ ಮಹಿಳೆಯವರಿಗೆ ದಂಡ ವಿಧಿಸಿದರು.

ಈ ಘಟನೆ ವಾರದ ನಂತರ ಅದೇ ಊರಿನ ಪತ್ರಕರ್ತ ವಿಜಯ ಕುಮಾರ್ ಅವರಿಗೆ ಗೊತ್ತಾಯಿತು. ಅವರು ‘ವಿಜಯವಾಣಿ’ಗಾಗಿ ಸುದ್ದಿಯನ್ನೂ ಮಾಡಿದರು. ನಂತರ ಅದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಜಿಲ್ಲಾಡಳಿತದ ಮೇಲೆ, ಸ್ಥಳೀಯ ಶಾಸಕ ರೇವಣ್ಣ ಅವರ ಮೇಲೆ ಒತ್ತಡ ಬಿತ್ತು. ಕೊನೆಗೆ, ಜಿಲ್ಲಾಡಳಿತವೇ ಮುಂದೆ ನಿಂತು ಮತ್ತೊಮ್ಮೆ ‘ದಲಿತರ ದೇವಾಲಯ ಪ್ರವೇಶ’ದ ಕಾರ್ಯಕ್ರಮವನ್ನು ಊರಿನ ಮೇಲ್ಜಾತಿ ಜನರ ವಿರೋಧದ ನಡುವೆಯೇ ಹಮ್ಮಿಕೊಳ್ಳಬೇಕಾಗಿ ಬಂತು. ಇದು ವೃತ್ತಿಪರ ವರದಿಗೆ ಸಲ್ಲಬೇಕಾದ ನ್ಯಾಯ ಕೂಡ.

ಆದರೆ, ಈ ಘಟನೆ ನಂತರ ‘ವಿಜಯವಾಣಿ’ ಆಡಳಿತ ಮಂಡಳಿ ವಿಜಯ ಕುಮಾರ್ ಅವರನ್ನು ದೂರದ ಗಂಗಾವತಿಗೆ ವರ್ಗಾವಣೆ ಮಾಡಿತು. ಆದರೆ, ಇಬ್ಬರು ಚಿಕ್ಕ ಮಕ್ಕಳ ಹಾಗೂ ಕೌಟುಂಬಿಕ ಕಾರಣದಿಂದ ಅವರು ಗಂಗಾವತಿಗೆ ಹೋಗಲಾಗಲಿಲ್ಲ. ಒಂದು ತಿಂಗಳು ಸಂಬಳ ಇಲ್ಲದೆ ರಜೆಯ ಮೇಲೆ ಇದ್ದರು. ಕೊನೆಗೆ, ‘ಪತ್ರಿಕೆ’ ಮೈಸೂರಿಗೆ ಮರು ವರ್ಗಾವಣೆ ಮಾಡಿತು. ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಕುಟುಂಬ ಹಾಗೂ ವೃತ್ತಿಯನ್ನು ನಿಭಾಯಿಸಲಾಗದೆ ವಿಜಯ ಕುಮಾರ್ ಒಂದಷ್ಟು ದಿನ ಹಾಸನ- ಮೈಸೂರಿನ ಹಾದಿ ಸವೆಸಿ, ರಾಜೀನಾಮೆ ಕೊಟ್ಟರು.

“ನಾನು ವರದಿ ಮಾಡಿದ್ದ ಸಿಗರನಹಳ್ಳಿ ರೇವಣ್ಣ ಅವರ ಸ್ವಕ್ಷೇತ್ರ. ನಾನು ಮಾಡಿದ ಘಟನೆಯ ವರದಿ ದೇವೇಗೌಡರ ಕುಟುಂಬವನ್ನು ಮುಜುಗರಕ್ಕೀಡು ಮಾಡಿತು. ಈ ಘಟನೆಯಲ್ಲಿ ದೇವೇಗೌಡರು ಮತ್ತು ಮಗ ರೇವಣ್ಣ ಮೇಲ್ವರ್ಗದ ಪರವಾಗಿ ನಿಂತು ಬಿಟ್ಟರು. ಈ ವರದಿಯನ್ನು ನಾನೇ ಮೊದಲು ಮಾಡಿದೆ ಎನ್ನುವ ಕಾರಣಕ್ಕೇ ನನ್ನು ವರ್ಗಾವಣೆ ಮಾಡಿಸಿದರು,” ಎನ್ನುತ್ತಾರೆ ವಿಜಯ ಕುಮಾರ್. ಕಾರ್ಯಕರ್ತರ ಸಮಾರಂಭವೊಂದರಲ್ಲಿ ದೇವೇಗೌಡರು ಸಿಗರನಹಳ್ಳಿ ಘಟನೆ ಬಗ್ಗೆ ಪ್ರಸ್ತಾಪಿಸುತ್ತಾ, “ಇದರ ಹಿಂದೆ ಪತ್ರಿಕೆಯವರೊಬ್ಬರಿದ್ದಾರೆ. ಅದು ನನಗೆ ಗೊತ್ತಿದೆ,” ಎಂದು ಹೇಳಿಕೆ ನೀಡಿದ್ದರು ಕೂಡ. ಕೊನೆಗೆ, ರಾಜ್ಯ ಮಟ್ಟದ ಪತ್ರಿಕೆ ಬಿಟ್ಟ ವಿಜಯ ಕುಮಾರ್ ಈಗ ಹಾಸನದಲ್ಲಿಯೇ ಸ್ಥಳೀಯ ಪತ್ರಿಕೆ ಮತ್ತು ಚಾನಲ್ ನಲ್ಲಿ ಕೆಲಸ ಆರಂಭಿಸಿದ್ದಾರೆ. ಜನರಿಗೆ ಸಲ್ಲಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಕೆಲಸ ಮುಂದುವರಿಸಿದ್ದಾರೆ.

ಇದೇ ವಿಚಾರವಾಗಿ ವಿಜಯವಾಣಿ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆಯವರನ್ನು ‘ಸಮಾಚಾರ’ ಸಂಪರ್ಕಿಸಿತು. ವಿಜಯ ಕುಮಾರ್ ವರ್ಗಾವಣೆ ವಿಷಯ ಪ್ರಸ್ತಾಪಿಸುತ್ತದ್ದಂತೆ “ನಿಮಗೇನ್ರೀ ಸಂಬಂಧ ಅದು? ನಾವು ನಮ್ಮ ಆಫೀಸ್ ಒಳಗಡೆ ಏನು ಬೇಕಾದ್ರೂ ಮಾಡ್ತೀವಿ. I will not comment on that, sorry” ಎಂದು ಫೋನಿಟ್ಟು ಬಿಟ್ಟರು.

Leave a comment

Top