An unconventional News Portal.

ಇ. ರಾಘವನ್ ನೆನಪಿಸಿಕೊಳ್ಳುತ್ತಿರುವ ಈ ವೇಳೆಯಲ್ಲಿ- Welcome to ‘ಸಮಾಚಾರ’

ಇ. ರಾಘವನ್ ನೆನಪಿಸಿಕೊಳ್ಳುತ್ತಿರುವ ಈ ವೇಳೆಯಲ್ಲಿ- Welcome to ‘ಸಮಾಚಾರ’

‘ಪತ್ರಿಕೋದ್ಯಮ ನಿಂತ ನೀರಲ್ಲ. ಆದರೆ ಪತ್ರಕರ್ತರು ಕಾಲಕ್ಕಿಂತ ಮುಂದೆಯೂ ಇರಬಾರದು, ಕಾಲದಿಂದ ಹಿಂದೆಯೂ ಉಳಿಯಬಾರದು. ಕಾಲದ ಜತೆಗೆ ನಡೆದುಕೊಂಡು ಹೋಗಬೇಕು’ ಎನ್ನುತ್ತಿದ್ದವರು ಇ. ರಾಘವನ್. ಆಗ ಅವರಿಗೆ 62 ವರ್ಷ ವಯಸ್ಸಾಗಿತ್ತು. ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದವರು. ಅವರ ಕೊನೆಯ ದಿನಗಳಲ್ಲಿ ಕನ್ನಡದ ದಿನ ಪತ್ರಿಕೆ, ‘ವಿಜಯ ಕರ್ನಾಟಕ’ದ ಸಂಪಾದಕರಾಗಿದ್ದರು. ಬಹುಶಃ ಕನ್ನಡ ಪತ್ರಿಕೋದ್ಯಮಕ್ಕೆ ಸಿಕ್ಕ ಅಪರೂಪದ ಸಂಪಾದಕ ಅವರು.

ತಮ್ಮ ವೃತ್ತಿಬದುಕಿನ ಕೊನೆಯ ದಿನದವರೆಗೂ ಅವರು ಪತ್ರಕರ್ತರಾಗಿಯೇ ಉಳಿದುಕೊಂಡರು. ಭ್ರಷ್ಟರಾಗಲಿಲ್ಲ; ರಾಜಕೀಯ ಅಧಿಕಾರದ ಬಲೆಗೆ ಬೀಳಲಿಲ್ಲ. ತಾನೇನು ಮಾಡುತ್ತಿದ್ದೇನೆ ಎಂಬ ಬಗ್ಗೆ ಸ್ಪಷ್ಟತೆ ಇತ್ತು. ಅವರಲ್ಲಿ ಅಂತಹದೊಂದು ಮನಸ್ಸು ರೂಪುಗೊಳ್ಳುವ ಹಿಂದೆ ಅವರ ಹೊಸ ಹುಡುಕಾಟಗಳಿದ್ದವು. ರಾಘವನ್ ತಮ್ಮ ಕೊನೆಯ ದಿನಗಳಲ್ಲೂ ಫೊಟೋಗ್ರಫಿಯ ಬಗ್ಗೆ ಹೊಸ ಓದಿಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದರು. ಅದಕ್ಕಾಗಿ ವಿದೇಶದಲ್ಲಿದ್ದ ತಮ್ಮ ಹತ್ತಿರದವರೊಬ್ಬರಿಂದ ಫೊಟೋಗ್ರಫಿಯ ಕುರಿತು ಪುಸ್ತಕಗಳನ್ನು ತರಿಸಿಕೊಂಡಿದ್ದರು. ಸದಾ ಕಾಲ ಪತ್ರಿಕೋದ್ಯಮದ ಹೊಸ ಬೆಳವಣಿಗೆಗಳನ್ನು ಗ್ರಹಿಸುವ, ಅದನ್ನು ಕನ್ನಡ ಪತ್ರಿಕೋದ್ಯಮಕ್ಕೆ ಬಳಸಿಕೊಳ್ಳುವ ಮಾತುಗಳನ್ನು ಆಡುತ್ತಿದ್ದರು. ಬಹುಶಃ ಇವತ್ತು ಅವರು ಇದ್ದಿದ್ದರೆ, ಡಿಜಿಟಲ್ ಯುಗದಲ್ಲಿ ಕನ್ನಡ ಪತ್ರಿಕೋದ್ಯಮ ಹೊಂದಬೇಕಾದ ರೂಪಾಂತರಗಳ ಬಗ್ಗೆಯೇ ಮಾತನಾಡುತ್ತಿದ್ದರು. ಸಂಪ್ರದಾಯ ಬದ್ಧವಾಗಿರುವ ಮಾಧ್ಯಮ ಚೌಕಟ್ಟು ಮೀರಲು ಹೊರಟ ಇಂತಹ ಹೊಸ ಸಾಹಸಗಳನ್ನು ಬೆಂಬಲಿಸುತ್ತಿದ್ದರು ಅನ್ನಿಸುತ್ತಿದೆ.

‘ಸಮಾಚಾರ. ಕಾಂ’ ರಾಘವನ್ ಹಾಗೂ ಅಂತಹ ಹಲವು ಹಿರಿಯರು ಧಾರೆ ಎರೆದ ಅನುಭವಗಳ ಬಳುವಳಿ ಅನ್ನಬಹುದು. ಕನ್ನಡ ಪತ್ರಿಕೋದ್ಯಮದ ಪರಂಪರೆಯನ್ನು ಅನನ್ಯವಾಗಿಟ್ಟು, ಪೋಷಿಸಿ ಬೆಳೆಸಿದವರ ಜತೆ ಕೆಲಸ ಮಾಡಿದ ಯುವ ಪತ್ರಕರ್ತರ ತಂಡವೊಂದು ಇದರ ಹಿಂದಿದೆ. ಇವರಿಗೆ ‘ಬೈಲೈನ್, ಪಿಟುಸಿ, ಸೈನ್ ಆಫ್’ಗಳ ಹಂಗಿಲ್ಲ; ಕೀರ್ತಿಯ ಹಪಾಹಪಿಗಳಿಲ್ಲ. ಅದಕ್ಕಿಂತ ಹೆಚ್ಚಾಗಿ ವೃತ್ತಿಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡು,  ‘ಸೆಟಲ್’ ಆಗಿಬಿಡಬೇಕು ಎಂಬ ಧಾವಂತ ಇಲ್ಲ. ಇರುವುದು ಇಷ್ಟೆ, ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ನಿಂತ ನೀರಾಗಿರುವ, ಏಕಮುಖ ಹಾದಿಯಲ್ಲಿ ಸಾಗುತ್ತಿರುವ ಕನ್ನಡ ಪತ್ರಿಕೋದ್ಯಮದಲ್ಲಿ ಪುಟ್ಟದೊಂದು ಸಂಚಲನ ಮೂಡಿಸುವುದು. ಶ್ರದ್ಧೆಯಿಂದ ವ್ಯವಸ್ಥೆಯೊಳಗಿನ ಕೆಟ್ಟದನ್ನು ತೊಳೆಯುವುದು. ಆ ಜಾಗದಲ್ಲಿ ಮುಂದಿನ ತಲೆಮಾರಿಗೆ ‘ಒಳ್ಳೆಯತನವಿದ್ದರೆ ಸಾಕು, ಬದುಕಿಕೊಳ್ಳಬಹುದು’ ಎಂಬ ಆಶಾದಾಯಕ ವಾತಾವರಣ ನಿರ್ಮಾಣಕ್ಕೆ ಚಿಕ್ಕದೊಂದು ಕೊಡುಗೆ ನೀಡುವುದು. ಹೊಸದೇನನ್ನೋ ಮಾಡಿ ಬಿಡುತ್ತೇವೆ ಎಂಬುದಕ್ಕಿಂತ, ಪತ್ರಿಕೋದ್ಯಮದ ಅನನ್ಯ ಪರಂಪರೆಯನ್ನು ಮುಂದಿನ ತಲೆಮಾರಿಗಾಗಿ ರೂಪಾಂತರಿಸುವ ಕೆಲಸ ಮಾಡುವುದು ಅಂತರಾಳದ ಉದ್ದೇಶ ಅಷ್ಟೆ.

ನಿಮಗೆ ರಾಕೆಟ್ ಮತ್ತು ವಿಮಾನಗಳ ನಡುವಿನ ವ್ಯತ್ಯಾಸಗಳು ಗೊತ್ತಿದೆ. ನಾವು ರಾಕೆಟ್ ಉಡಾವಣೆ ಮಾಡುವ ಪರಿಣಿತರ ತಂಡವಲ್ಲ. ತುದಿಗಾಲ ಮೇಲೆ ನಿಂತು ನಭಕ್ಕೆ ಹಾರಿ, ನಮ್ಮನ್ನು ನಾವು ಅಗ್ನಿ ಪರೀಕ್ಷೆಗೆ ಒಡ್ಡಿಕೊಳ್ಳುವ ಮನಸ್ಸೂ ನಮಗಿಲ್ಲ. ಬದಲಿಗೆ, ಒಂದಷ್ಟು ದೂರ ‘ರನ್ ವೇ’ಯಲ್ಲಿ ಸಾಗಿ, ವೇಗವನ್ನು ಹೆಚ್ಚಿಸಿಕೊಂಡು, ‘ಟೇಕ್ ಆಫ್’ ಆಗಿ, ಅಂದುಕೊಂಡ ಗಮ್ಯವನ್ನು ಸುರಕ್ಷಿತವಾಗಿ ಮುಟ್ಟುವ ಮನಸ್ಥಿತಿಯಲ್ಲಿರುವವರು ನಾವು. ಸಿದ್ಧಾಂತಗಳ ವಿಚಾರಕ್ಕೆ ಬಂದರೆ, ನಮ್ಮದು ‘ಪತ್ರಿಕೋದ್ಯಮ’ ಎಂಬ ಪವಿತ್ರ ಸಿದ್ಧಾಂತ. ಸುದ್ದಿಯಲ್ಲಿ ನಮಗೆ ನೆಗೆಟಿವ್, ಪಾಸಿಟಿವ್ ಕಾಣಿಸುವುದಿಲ್ಲ. ಎಡ, ನಡುವೆ ಮತ್ತು ಬಲವೂ ಕಾಣಿಸುವುದಿಲ್ಲ. ಕಾಣಿಸುವುದು ಇಷ್ಟೆ, ಸತ್ಯ ಮತ್ತು ಸುಳ್ಳು, ವಾಸ್ತವ ಮತ್ತು ಭ್ರಮೆ, ದನಿ ಇಲ್ಲದವರು ಮತ್ತು ಅಬ್ಬರಿಸುತ್ತಿರುವವರು… ನಾವು ಯಾರ ಪರವಾಗಿ ನಿಲ್ಲುತ್ತೀವಿ ಎಂಬುದನ್ನು ಮಾತಿನಲ್ಲಿ ಘೋಷಿಸಿಕೊಳ್ಳಲು ಹೋಗುವುದಿಲ್ಲ. ಒಂದಷ್ಟು ದಿನ ನಮ್ಮನ್ನು ಗಮನಿಸಿ ನಂತರ ನೀವೇ ತೀರ್ಮಾನಕ್ಕೆ ಬನ್ನಿ ಎಂಬುದು ವಿನಂತಿ.

‘ಹಿಟ್ಸ್, ಟಿ ಆರ್ ಪಿ, ಸರ್ಕ್ಯುಲೇಶನ್’ ಎಂಬ ಕನ್ವೆನ್ಷನಲ್ ಆದ ಪತ್ರಿಕೋದ್ಯಮದ ಮಾನದಂಡಗಳನ್ನು ಮೀರುವ ಪ್ರಯತ್ನ ನಮ್ಮ ಹೆಜ್ಜೆ ಹೆಜ್ಜೆಯಲ್ಲೂ ಇರಲಿದೆ. ಹೀಗಾಗಿ, ನಮಗೆ ಸಂಖ್ಯೆ ಮುಖ್ಯವಲ್ಲ. ಜಗತ್ತಿನ ಬಹುದೊಡ್ಡ ಬದಲಾವಣೆಗಳು ಎಂಬ ಗುರುತಿಸುವ ಯಾವುದೇ ಘಟನೆಯನ್ನು ತೆಗೆದುಕೊಳ್ಳಿ, ಅಲ್ಲಿ ಸಂಖ್ಯೆ ಮಾನದಂಡವಾಗಿಲ್ಲ ಎಂಬುದು ಇತಿಹಾಸ.

ಕೊನೆಯದಾಗಿ, ನಾವು ಇಲ್ಲಿ ನಿಮಗೆ ಭರವಸೆಗಳನ್ನು ನೀಡಲು ಹೊರಡುವುದಿಲ್ಲ. ಈ ಸಮಯದಲ್ಲಿ ನಮ್ಮ ಕೋರಿಕೆ ಇಷ್ಟೆ, ಇದು ನಿಮ್ಮದೇ ಸಮಾಚಾರಗಳನ್ನು ಎತ್ತಿಕೊಂಡು, ಅದಕ್ಕೊಂದು ಭಿನ್ನವಾದ ಪತ್ರಿಕೋದ್ಯಮದ ಚೌಕಟ್ಟು ಹಾಕಿ, ನಿಮಗೇ ವಾಪಾಸು ನೀಡುವ ಕೆಲಸ. ಅದಕ್ಕಾಗಿಯೇ ಈ ಕಾಲದ ಎಲ್ಲಾ ತಂತ್ರಜ್ಞಾನಗಳನ್ನು ನಾವು ಬಳಸಿಕೊಳ್ಳಲಿದ್ದೇವೆ. ಪತ್ರಿಕೋದ್ಯಮ ಮತ್ತು ತಂತ್ರಜ್ಞಾನದ ನಡುವೆ ಬೆಸುಗೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ. ಕಾಲದ ಜತೆಗೇ ಹೆಜ್ಜೆ ಹಾಕುತ್ತೇವೆ.

ಇದು ‘ಸಮಾಚಾರ.ಕಾಂ’ ಆರಂಭದ ಸಮಯದಲ್ಲಿ ನಮ್ಮ ತಂಡ ನಿಮ್ಮ ಜತೆ ಹಂಚಿಕೊಳ್ಳಬೇಕು ಎಂದುಕೊಂಡ ವಿಚಾರಗಳು. ಎಲ್ಲಾ ವಿಚಾರದಲ್ಲೂ ನಾವು ಯಥಾಸ್ಥಿತಿಯನ್ನು ಮೀರಬೇಕು ಎಂದುಕೊಂಡಿದ್ದೇವೆ. ನಮ್ಮ ‘ಉದ್ಘಾಟನೆ, ಲೋಕಾಪರ್ಣೆ, ಲಾಂಚಿಂಗ್’ ವಿಚಾರದಲ್ಲೂ ಕೂಡ. ನಾವು ‘ಟೇಪ್ ಕಟ್’ ಮಾಡಿಸುವ ಸಂಪ್ರದಾಯವನ್ನು ಇವತ್ತು ಮೀರಿದ್ದೇವೆ. ನೀವು ಇಷ್ಟನ್ನು ಓದಿದ್ದೀರಿ, ಎಂದರೆ ನಮ್ಮ ಉದ್ಘಾಟನೆ ಜತೆಗೆ ಇದ್ದೀರಿ ಎಂದುಕೊಳ್ಳುತ್ತೇವೆ…

ಪ್ರೀತಿಯಿಂದ, 

ಸಮಾಚಾರ ಬಳಗ

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top