An unconventional News Portal.

ಸುಖಾಂತ್ಯಗೊಂಡ 7 ಗಂಟೆಗಳ ‘ಈಜಿಪ್ಟ್ ವಿಮಾನ ಹೈ ಜಾಕ್’ ಪ್ರಹಸನ; ಅಪಹರಣಕಾರನ ಬಂಧನ

ಸುಖಾಂತ್ಯಗೊಂಡ 7 ಗಂಟೆಗಳ ‘ಈಜಿಪ್ಟ್ ವಿಮಾನ ಹೈ ಜಾಕ್’ ಪ್ರಹಸನ; ಅಪಹರಣಕಾರನ ಬಂಧನ

ಮಂಗಳವಾರ ಬೆಳಗ್ಗೆಯಿಂದ ನಡೆದ 7 ಗಂಟೆಗಳ ‘ಈಜಿಪ್ಟ್ ಏರ್ ಫ್ಲೈಟ್ 181 ಅಪಹರಣ’ ಪ್ರಹಸನ ಸುಖಾಂತ್ಯ ಕಂಡಿದೆ. ಅಪಹರಣಕಾರ ಸೈಫ್ ಎಲ್ ಮುಸ್ತಫಾನನ್ನು ಬಂಧಿಸಿರುವುದಾಗಿ ಸಿಪ್ರಸ್ ವಿಮಾನಯಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

'ಈಜಿಪ್ಟ್ ಏರ್' ಟ್ವೀಟ್.

ಈಜಿಪ್ಟ್ ಅಲೆಗ್ಸಾಂಡ್ರಿಯಾ ನಗರದಿಂದ 81 ಜನರನ್ನು ಹೊತ್ತ ಡೊಮೆಸ್ಟಿಕ್ ಜಟ್ ಫ್ಲೈಟ್ ರಾಜಧಾನಿ ಕೈರೋಗೆ ಹೊರಟಿತ್ತು.  ಮಾರ್ಗ ಮಧ್ಯೆ ಅಪಹರಣಕ್ಕೀಡಾಗಿತ್ತು. ವಿಮಾನದಲ್ಲಿದ್ದ ಸಹ ಪ್ರಯಾಣಿಕ ಮುಸ್ತಫಾ ಬಾಂಬ್ ಕಟ್ಟಿಕೊಂಡಿರುವುದಾಗಿ ಹೆದರಿಸಿದ್ದಾನೆ. ಈ ಸಮಯದಲ್ಲಿ ವಿಮಾನವನ್ನು ಇಸ್ತಾನ್ಬುಲ್ಗೆ ತಿರುಗಿಸುವಂತೆ ಹೇಳಿದ್ದಾನೆ. ಆದರೆ, ಇಂಧನ ಕೊರತೆಯೊಂದಾಗಿ ಸಿಪ್ರಸ್ನ ಲಾರ್ನಕ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲಿ ಅಪಹರಣಕಾರನ ಜತೆ ಸಿಪ್ರಸ್ ವಿಮಾನಯಾನ ಇಲಾಖೆ ಅಧಿಕಾರಿಗಳು ಹಾಗೂ ‘ಈಜಿಪ್ಟ್ ಏರ್’ ವಿಮಾನಯಾನ ಸಂಸ್ಥೆ ಅಧಿಕಾರಿಗಳು ದುಭಾಷಿ ಮೂಲಕ ಸಂಧಾನ ಮಾತುಕತೆ ಶುರುಮಾಡಿದರು. ಆರಂಭದಲ್ಲಿಯೇ ಸಂಧಾನಕ್ಕೆ ಒಪ್ಪಿದ ಅಪಹರಣಕಾರ 58 ಜನ ಪ್ರಯಾಣಿಕರನ್ನು ಬಿಡುಗಡೆ ಮಾಡಿದ. ಆದರೆ, ವಿಮಾನದ ಸಿಬ್ಬಂದಿ, ಒಬ್ಬರು ಏರ್ ಮಾರ್ಷಲ್ ಹಾಗೂ ಮೂವರು ವಿದೇಶಿ ಪ್ರಯಾಣಿಕರನ್ನು ಉಳಿಸಿಕೊಂಡಿದ್ದ.

ವಿಚಿತ್ರ ಬೇಡಿಕೆ:

ಸಂಧಾನ ಮುಂದುವರಿಯುತ್ತಿದ್ದಂತೆ ಮುಸ್ತಫಾ ವಿಚಿತ್ರ ಬೇಡಿಕೆಯೊಂದನ್ನು ಮುಂದಿಟ್ಟ. ಆತನ ವಿಚ್ಚೇದಿತ ಪತ್ನಿ ಸಿಪ್ರಸ್ನಲ್ಲಿಯೇ ನಿವಾಸಿ. ಆಕೆಗೆ ಒಂದು ಪತ್ರವನ್ನು ತಲುಪಿಸುಲು ಆತ ಸಂಧಾನಕಾರರಿಗೆ ತಿಳಿಸಿದ. ಈ ಸಮಯದಲ್ಲಿ ಆಕೆಯನ್ನು ಪತ್ತೆ ಹಚ್ಚಿದ ಸ್ಥಳೀಯ ಪೊಲೀಸರು ಅಪಹರಣಕಾರನ ಪತ್ನಿಯನ್ನು ಕರೆತಂದರು. ‘ಬಹುಶಃ ಆಕೆಯ ಜತೆ ಮಾತುಕತೆಗೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರಬಹುದು,’ ಎಂದು ಈಜಿಪ್ಟ್ನ ಸನಾ ವಾಹಿನಿ ವರದಿ ಮಾಡಿದೆ. ಆದರೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ.

ಮುಗಿದ ಪ್ರಹಸನ:

Egyptair_Hijackಹೀಗೆ, 7 ಗಂಟೆಗಳ ಕಾಲ ನಡೆದ ಬೆಳವಣಿಗೆ, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮೂಲಕ ಅಂತ್ಯವಾಯಿತು. ಬೆನ್ನಿಗೇ ಅಪಹರಣಕಾರ ಮುಸ್ತಫಾನನ್ನು ವಶಕ್ಕೆ ಪಡೆದಿರುವುದಾಗಿ ಸಿಪ್ರಸ್ ವಿಮಾನಯಾನ ಅಧಿಕಾರಿಗಳು ಅಧಿಕೃತವಾಗಿ ಘೋಷಿಸಿದರು. ಇದರ ನಡುವೆಯೇ ಪತ್ರಿಕಾ ಗೋಷ್ಠಿ ನಡೆಸಿದ, ಈಜಿಪ್ಟ್ ವಿಮಾನಯಾನ ಸಚಿವ ಷರೀಫ್ ಪಾಥಿ, “ಸತ್ಯ ಏನೆಂದರೆ, ಅಪಹರಣಕಾರ ಬಾಂಬ್ ಹೊಂದಿದ್ದಾನೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. ಆದರೆ ಒತ್ತೆಯಾಳುಗಳಾಗಿರುವವರ ಸುರಕ್ಷತೆ ನಮ್ಮ ಆದ್ಯತೆ. ಹೀಗಾಗಿ ಎಚ್ಚರಿಕೆಯಿಂದ ಬೆಳವಣಿಗೆಯನ್ನು ನಿಭಾಯಿಸುತ್ತಿದ್ದೇವೆ.” ಎಂದರು. ಆದರೆ, ಎಲ್ಲಿಯೂ ಅಪಹರಣಕಾರನ ಬೇಡಿಕೆಗಳ ಬಗ್ಗೆ ಬಾಯಿ ಬಿಡಲಿಲ್ಲ. ಯುರೋಪಿಯನ್ ಯೂನಿಯನ್ ಕಡೆಯಿಂದ ಒಬ್ಬರು ಸಂಧಾನಕ್ಕೆ ಬರಬೇಕು, ಹೊರಗಿನ ದೇಶದಲ್ಲಿ ಆಶ್ರಯ ನೀಡಬೇಕು, ಈಜಿಪ್ಟ್ ಜೈಲಿನಿಂದ ಕೆಲವು ಕೈದಿಗಳನ್ನು ಬಿಡುಗಡೆ ಮಾಡಬೇಕು ಹೀಗೆ ಹಲವು ಬೇಡಿಕೆಗಳನ್ನು ಆತ ಮುಂದಿಟ್ಟಿದ್ದ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಸುರಕ್ಷತೆ ಬಗ್ಗೆ ಟೀಕೆ:

ಘಟನೆ ಸುಖಾಂತ್ಯವಾಗುತ್ತಿದ್ದಂತೆ ವಿಮಾನಯಾನ ಕ್ಷೇತ್ರದಲ್ಲಿ ಈಜಿಪ್ಟ್ ಪಾಲಿಸುತ್ತಿರುವ ಸುರಕ್ಷತಾ ನೀತಿಗಳ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕೆಲವು ತಿಂಗಳ ಹಿಂದೆ ಈಜಿಪ್ಟ್ ವಾಯುನೆಲೆಯನ್ನು ಸಾಗಿ ಹೋಗುತ್ತಿದ್ದ ರಷ್ಯಾ ವಿಮಾನವೊಂದನ್ನು ಐಸಿಸ್ ಹೊಡೆದುರುಳಿಸಿತ್ತು. ಇದೀಗ ಸಾಮಾನ್ಯ ನಾಗರೀಕನೊಬ್ಬ ಶಸ್ತ್ರಾಸ್ತ್ರಸಹಿತ ವಿಮಾನ ಹತ್ತಿದ್ದರ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ, ಆತನ ಯಾವ ರೀತಿಯ ಶಸ್ತ್ರಾಸ್ತ್ರ ಅಥವಾ ಸ್ಫೋಟಕಗಳನ್ನು ಹೊಂದಿದ್ದ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಬೇಕಿದೆ.

ಒಟ್ಟಿನಲ್ಲಿ, ಮಂಗಳವಾರ ಬೆಳಗ್ಗೆಯಿಂದ ಅಂತರಾಷ್ಟ್ರೀಯ ಸುದ್ದಿ ಕೇಂದ್ರದಲ್ಲಿ ನಿರಂತರ ಬೆಳವಣಿಗೆ ಹೊಂದಿದ ಘಟನೆಯೊಂದು ಹೀಗೆ ಪ್ರಹಸನದ ರೀತಿಯಲ್ಲಿ ಅಂತ್ಯಗೊಂಡಿದೆ.

Top